ಬ್ರೂಕ್, ಫಲ್ಕ್ ಗ್ರೇವೀಲ್, ಮೊದಲ ಬೇರನ್
1554-1628. ಎಲಿಜಬೆತ್ ರಾಣಿಯ ಆಸ್ಥಾನದಲ್ಲಿದ್ದ ಸಾಹಿತಿ, ಸರದಾರ ಹಾಗೂ ರಾಜಕಾಣಿ. ಶ್ರೀಮಂತ ತಂದೆಯ ಒಬ್ಬನೇ ಮಗ. ಹುಟ್ಟಿದ್ದು ವಾರ್ವಿಕ್‍ಪೈರಿನ ಭೋಷಾಂಪ್ ಕೋರ್ಟಿನಲ್ಲಿ. ಫಿಲಿಪ್ ಸಿಡ್ನಿ ಈತನ ಆಜೀವ ಗೆಳೆಯ. ಜೊತೆಯಲ್ಲೇ ಶಾಲಾ ಪರೀಕ್ಷೆ ಮುಗಿಸಿ ಕೇಂಬ್ರಿಜ್‍ನ ಜೀಸಸ್ ಕಾಲೇಜು ಸೇರಿ ಪದವೀಧರರಾಗಿ ಎಲಿಜಬೆತ್ ರಾಣಿಯ ಅಸ್ಥಾನಿಕರಾದರು (1577). ಗ್ರೇವೀಲ್ ರಾಣಿಗೆ ಬಹುಬೇಗ ಮೆಚ್ಚಾದ. ಹೌಸ್ ಅಫ್ ಕಾಮನ್ಸ್ ಸಭೆಯಲ್ಲಿ ವಾರ್ವಿಕ್ ಪೈರಿನ ಪ್ರತಿನಿಧಿ ಸದಸ್ಯನಾಗಿ ಕೆಲವುವರ್ಷ ಇದ್ದ. ಮಹಾರಾಣಿ ಈತನ ರಾಷ್ಟ್ರ ಸೇವೆ ಮೆಚ್ಚಿ ನೈಟ್‍ಹುಡ್ ಪ್ರಶಸ್ತಿ ಪ್ರಧಾನಮಾಡಿದಳು (1597). 1614ರಲ್ಲಿ ರಾಜ ಭಂಡಾರದ ಮುಖ್ಯಾಧಿಕಾರಿಯಾಗಿ ರಾಜ್ಯದ ವರಿಷ್ಠ ಸ್ಥಾನವನ್ನು ಅಲಂಕರಿಸಿದ.

	ಎಲಿಜಬೆತ್ ರಾಣಿಯ ಕಾಲಾನಂತರದ ದೊರೆ 4ನೆಯ ಜೇಮ್ಸ್‍ನ ಮುಖ್ಯ ಬೆಂಬಲಿಗನಾಗಿ ರಾಜಸಿಂಹಾಸನದ ನಿಷ್ಕಪ್ರಜೆಯಾಗಿ ಸಲ್ಲಿಸಿದ ಸೇವೆಗಾಗಿ ಈತ ದೊರೆಯ ವಿಶೇಷ ಕೃಫೆಗೆ ಪಾತ್ರನಾದ. 1621ರಲ್ಲಿ ದೊರೆ ಈತನನ್ನು ಬೇರನ್ ಬ್ರೂಕ್ ಎಂದು ನಾಮಕರಣ ಮಾಡಿ ಸನ್ಮಾನಿಸಿದ. ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ವಿಶೇಷವಾದ ಅಸಕ್ತಿ ವಹಿಸುತ್ತಿದ್ದ ಈತ ದೊರೆಯ ಆಪ್ತ ಮಂತ್ರಾಲೋಚಕರಲ್ಲಿ ಒಬ್ಬನಾದ.

	ಅನೇಕ ಕವಿಗಳಿಗೆ ಮತ್ತು ನಾಟಕಕಾರರಿಗೆ ಪೋಷಕ ಮತ್ತು ಮಿತ್ರ ಆಗಿದ್ದುದಲ್ಲದೆ ಸ್ವತಃ ಕೆಲವು ನಾಟಕ ಮತ್ತು ಕವಿತೆ ಕೂಡ ರಚಿಸಿದ. ಅದರೆ ಅವು ಅಷ್ಟೇನೂ ಪ್ರಸಿದ್ಧವಾಗಲಿಲ್ಲ. ಈತನ ಅಸಕ್ತಿ ಹೆಚ್ಚಾಗಿ ತತ್ತ್ವಶಾಸ್ತ್ರದಲ್ಲಿತ್ತೇ ವಿನಾ ಕಾವ್ಯದಲ್ಲಿರಲಿಲ್ಲ. ಆಪ್ತಮಿತ್ರನಾದ ಸರ್ ಫಿಲಿಪ್ ಸಿಡ್ನಿ ಯುದ್ಧದಲ್ಲಿ ಮಡಿದನೆಂಬ ವಾರ್ತೆ ಕೇಳಿ ಶೋಕ ಸಂತಪ್ತನಾದ ಗ್ರೇವೀಲ್ 1593ರಲ್ಲಿ ಫೀನಿಕ್ಸ್ ನೆಸ್ಟ್ ಎಂಬ ಒಂದು ಶೋಕಗೀತೆಯನ್ನು ರಚಿಸಿದ. ಅಲ್ಲದೆ ಅತನ ಜೀವನಚರಿತ್ರೆಯನ್ನೂ ಬರೆದ. ಇದು ಈಗಲೂ ಪ್ರಖ್ಯಾತ ಕೃತಿಯಾಗಿದೆ. ಈತ ರಚಿಸಿದ ಅಲಾಹಮ್ ಮತ್ತು ಮುಸ್ತಾಫಾ (1609) ಸೆನೆಕಾ ಮಾದರಿಯ ವಿಷಾದಾಂತ ನಾಟಕಗಳಾಗಿವೆ. 1870ರಲ್ಲಿ ಈತನ ಕೃತಿಗಳೆಲ್ಲ ಪುನರ್‍ಮುದ್ರಣಗೊಂಡವು.

	ಈತ ಇಂಗ್ಲಿಷ್ ಇತಿಹಾಸದಲ್ಲಿ ಫಿಲಿಪ್ ಸಿಡ್ನಿಯಷ್ಟೇ ವರ್ಚಸ್ವಿಯಾದ ವ್ಯಕ್ತಿ.				(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ